Arkalgud : ವೈಭವದ ಅಮೃತೇಶ್ವರಸ್ವಾಮಿ ಮಹಾ ರಥೋತ್ಸವ

ಅರಕಲಗೂಡು: ಪಟ್ಟಣದ ಕೋಟೆ ಪುರಾಣ ಪ್ರಸಿದ್ದ ಅಮೃತೇಶ್ವರಸ್ವಾಮಿ ಮಹಾ ರಥೋತ್ಸವವು ಸೋಮವಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. 

ಬೆಳಿಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ  ಅಭಿಷೇಕ, ಪೂಜಾ ಕೈಂಕರ್ಯಗಳು ನೆರವೇರಿದವು. ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಕೃಷ್ಣಗಂಧೋತ್ಸವ ನಡೆಸಲಾಯಿತು. ಉತ್ಸವದಲ್ಲಿ ಬಂದ ಮೂರ್ತಿಗಳನ್ನು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಾವಿಧಿಗಳನ್ನು ನಡೆಸಲಾಯಿತು.
ಅರೇಮಾದನಹಳ್ಳಿ ವಿಶ್ವಕರ್ಮ ಮೂಲ ಮಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ತಹಶೀಲ್ದಾರ್ ಕೆ.ಸಿ. ಸೌಮ್ಯ  ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ ರಥ ಬೀದಿಯಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು. ನಾದಸ್ವರ, ತಮಟೆ ವಾದ್ಯಗಳು ರಥೋತ್ಸವಕ್ಕೆ ಮೆರಗು ನೀಡಿತು. ತಮಟೆ ವಾದ್ಯದ ಲಯಕ್ಕೆ ಯುವಕರು, ಚಿಣ್ಣರು, ಮಹಿಳೆಯರು ಹೆಜ್ಜೆಹಾಕಿದರು.  ತೇರನ್ನು ಎಳೆಯುತ್ತಿದ್ದ ಭಕ್ತರಿಗೆ ಬಿಸಿಲಿನ ದಗೆ ನೀಗಿಸಲು ಮನೆ, ಮನೆಗಳಲ್ಲಿ ಮಜ್ಜಿಗೆ, ಪಾನಕ, ಮುಂತಾದ ತಂಪು ಪಾನಿಯಗಳನ್ನು ವಿತರಿಸಲಾಯಿತು. ರಥ ಸ್ವಸ್ಥಾನ ಸೇರಿದ ಬಳಿಕ ಪ್ರಸಾದ ವಿನಿಯೋಗ ನಡೆಸಲಾಯಿತು.

 ಪಪಂ ಮುಖ್ಯಧಿಕಾರಿ ಸಿ.ಡಿ. ನಾಗೇಂದ್ರಕುಮಾರ್, ಕಂದಾಯ ನಿರೀಕ್ಷಕ ಕೆ.ಸಿ. ಲೋಕೇಶ್,  ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜ್, ಮುಖಂಡರಾದ ಮುತ್ತಿಗೆ ರಾಜೇಗೌಡ, ವಿ. ಎ. ನಂಜುಂಡಸ್ವಾಮಿ, ನರಸೇಗೌಡ, ವೆಂಕಟೇಶ್, ರಮೇಶ್ ವಾಟಾಳ್, ನಿತ್ಯಜ್ಯೋತಿ ನಾಗರಾಜ್, ಎ.ಎಸ್. ಹಿರಣ್ಣಯ್ಯ, ಎ.ಎನ್. ಗಣೇಶಮೂರ್ತಿ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನರಸಿಂಹ ಮೂರ್ತಿ,  ಕಾರ್ಯದರ್ಶಿ ರಮೇಶ್  ಉಪಸ್ಥಿತರಿದ್ದರು. ರಾತ್ರಿ ಶಾಂತೋತ್ಸವ ನಡೆಯಿತು.

Post a Comment

Previous Post Next Post