ಅರಕಲಗೂಡು : ತಾಲೂಕಿನ ಮಲ್ಲಿಪಟ್ಟಣ ಹೋಬಳಿ ನೆಲಬಳ್ಳಿ ಗ್ರಾಮದ ತಿಮ್ಮೇಗೌಡ ಬಿನ್ ಹನುಮೇಗೌಡ ಎಂಬ ರೈತ ಸಾಲಭಾದೆಯಿಂದ ಬುಧವಾರ ಮಧ್ಯಾಹ್ನ ಕೃಷಿ ಜಮೀನಿನ ಮರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಇಂದು ಬೆಳಗ್ಗೆ ತಿಂಡಿ ತಿಂದು ಕೃಷಿ ಜಮೀನು ಬಳಿ ಹೋಗಿಬರುವುದಾಗಿ ಹೇಳಿ ಹೋಗಿದ್ದು,ಮಧ್ಯಾಹ್ನ ಊಟಕ್ಕೆ ಬರದೇ ಇದ್ದ ಕಾರಣ ಜಮೀನು ಬಳಿ ಕುಟುಂಬಸ್ತರು ಹೋಗಿನೋಡಿದ ವೇಳೆ ಮರದಲ್ಲಿ ನೇಣುಬಿಗಿದುಕೊಂಡಿರುವ ದೃಶ್ಯವನ್ನು ಕಂಡು ಗಾಬರಿಗೊಂಡಿದ್ದಾರೆ.ಹತ್ತಿರ ಹೋಗಿ ನೋಡಿದ ವೇಳೆ ಪ್ರಾಣ ಬಿಟ್ಟಿರುವುದು ಖಾತ್ರಿಯಾಗಿದೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.ಅರಕಲಗೂಡಿನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರೈತನ ಮೃತದೇಹವನ್ನು ಇಡಲಾಗಿದೆ.
ಮೃತ ರೈತನಿಗೆ ನಾಲ್ಕು ಎಕರೆ ಜಮೀನು ಇದ್ದು,ಜಮೀನಿನಲ್ಲಿ ಶುಂಠಿ ಹಾಗೂ ಜೋಳ ಕಾಫಿ ಮೆಣಸು ಮಿಶ್ರ ಬೆಳೆ ಬೆಳೆದಿದ್ದು ಬೆಳೆ ಬೆಳೆಯಲು ಮಲ್ಲಿಪಟ್ಟಣ ಗ್ರಾಮದಲ್ಲಿರುವ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ 1ಲಕ್ಷ ರೂ ಸಾಲ,ನಾಲ್ಕು ಲಕ್ಷದವರೆಗೆ ಒಡವೆಗಳನ್ನು ಬ್ಯಾಂಕಿನಲ್ಲಿ ಅಡಮಾನ ಸಾಲ ಮತ್ತು ಒಂದು ಲಕ್ಷರೂ ಕೈಸಾಲ ಮಾಡಿದ್ದಾರೆ ಎನ್ನಲಾಗಿದೆ.
ಈ ಬಾರಿಯ ಅತಿಯಾದ ಮಳೆಯಿಂದ ಎಲ್ಲಾ ಬೆಳೆಗಳು ಹಾನಿಯಾಗಿದ್ದು, ಸಾಲಕ್ಕೆ ಹೆದರಿ ಮನನೊಂದು ಕೃಷಿ ಜಮೀನಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಹಸೀಲ್ದಾರ್ ಕೆ ಸಿ ಸೌಮ್ಯ ಮತ್ತು ಗ್ರೇಡ್ -2 ತಹಸೀಲ್ದಾರ್ ಸ್ವಾಮಿ,ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಕವಿತಾ ಅವರು ಭೇಟಿ ನೀಡಿ ಮೃತ ರೈತನ ಕುಟುಂಬಂದಿಂದ ಮಾಹಿತಿ ಪಡೆದುಕೊಂಡು ಸಾಂತ್ವನಾ ನೀಡಿದರು.
ಮೃತ ರೈತನ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಮೇಲಾಧಿಕಾರಿಗಳಿಗೆ ವರದಿ ಮಾಡಿ ಅತಿ ಶೀಘ್ರವಾಗಿ ಪರಿಹಾರ ಕೊಡಿಸಲಾಗುವುದು ಎಂದು ತಹಸೀಲ್ದಾರ್ ಸೌಮ್ಯ ಅವರು ತಿಳಿಸಿದರು.
Tags
ಅರಕಲಗೂಡು