ಅರಕಲಗೂಡು: ಮನುಕುಲದ ಉಳಿವಿಗಾಗಿ ಪರಿಸರ ಶುಚಿತ್ವ ಕಾಪಾಡುವ ಉದ್ದೇಶದಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಕೆ ಕುರಿತು ಜನ ಜಾಗೃತಿ ಅತ್ಯಗತ್ಯ ಎಂದು ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ ಸಲಹೆ ನೀಡಿದರು.
ತಾಲೂಕಿನ ಕೊಣನೂರು ಗಣಪತಿ ಪೆಂಡಾಲ್ ಆವರಣದಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪರಿಸರ ಸ್ನೇಹಿ ಗಣಪತಿ ವಿಗ್ರಹ ತಯಾರಿಕಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಸಾಯನಿಕ ಬಳಸಿ ಗಣಪತಿ ವಿಗ್ರಹ ತಯಾರಿಸುವುದರಿಂದ ಪರಿಸರ ಕಲುಷಿತಗೊಂಡು ಅನೇಕ ದುಷ್ಪರಿಣಾಮಗಳನ್ನು ಎದುರಿಸುವಂತಾಗಿದೆ. ನೀರಿನಲ್ಲಿ ಬೆರೆತ ರಾಸಾಯನಿಕದಿಂದ ಅಪಾರ ಜಲಚರ ಜೀವಿಗಳ ಜೀವಕ್ಕೂ ಕಂಟಕವಾಗಲಿದೆ. ಹೀಗಾಗಿ ಎಲ್ಲರೂ ಎಚ್ಚೆತ್ತು ರಾಸಾಯನಿಕ ಬಳಕೆಗೆ ಕಡಿವಾಣ ಹಾಕುವ ಮೂಲಕ ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಕೆಗೆ ಆದ್ಯತೆ ನೀಡಬೇಕಿದೆ ಎಂದರು.
ಮಕ್ಕಳು ಕಾರ್ಯಾಗಾರದಲ್ಲಿ ತಾವು ತಯಾರಿಸಿದ ಪರಿಸರ ಸ್ನೇಹಿ ಗಣಪತಿ ವಿಗ್ರಹವನ್ನು ಮನೆಗೆ ಕೊಂಡೊಯ್ದು ಭಕ್ತಿ ಶ್ರದ್ಧೆಯಿಂದ ಕೂರಿಸಿ ಗಣಪತಿ ಹಬ್ಬ ಆಚರಿಸುವಂತೆ ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷ ನಾಗರಾಜು, ನಿವೃತ್ತ ಪ್ರಾಂಶುಪಾಲ ಬಸವರಾಜು, ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ್, ತಾಪಂ ಮಾಜಿ ಸದಸ್ಯರಾದ ಎಂ.ಟಿ. ಪಾಂಡುರಂಗ, ಬಿ.ಸಿ. ವೀರೇಶ್, ಸಿದ್ದರಾಮೇಗೌಡ, ಶ್ರೀನಿವಾಸ್ ಮೂರ್ತಿ, ಉಪನ್ಯಾಸಕ ದಶರಥ, ಜಗದೀಶ್, ಮುಖಂಡರಾದ ಕಾಂತರಾಜು, ಸತೀಶ್, ನಸ್ರುಲ್ಲಾ ಟಿಪ್ಪು, ಶ್ರೀನಿವಾಸ್ ಇತರರಿದ್ದರು.
ಅರೇಮಾದನಹಳ್ಳಿ ಶಿಲ್ಪಿ ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ವಿವಿಧ ಶಾಲೆಯ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಕಾರ್ಯಾಗಾರದಲ್ಲಿ ಉತ್ಸಾಹದಿಂದ ಭಾಗವಹಿಸಿ ಕೈಚಳಕ ಪ್ರದರ್ಶಿಸುವ ಮೂಲಕ ಜೇಡಿ ಮಣ್ಣಿನಿಂದ ಆಕರ್ಷಕವಾದ ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಸಿ ಪ್ರತಿಭಾ ಕೌಶಲ್ಯತೆ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
News5Kannada
Ravi Dummi
Tags
ಕೊಣನೂರು