ಅರಕಲಗೂಡು: 'ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆತಾಗ ಸಮ ಸಮಾಜ ನಿರ್ಮಾಣ ಸಾಧ್ಯ' ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಕೆ. ನಾಗೇಶ್ ಮೂರ್ತಿ ತಿಳಿಸಿದರು.
ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 'ಬಡವರು, ಹಿಂದುಳಿದವರು, ತುಳಿತಕ್ಕೊಳಗಾದವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರವುದು ಅಗತ್ಯವಾಗಿದೆ. ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಬೇಕು ಎಂಬುದು ನ್ಯಾಯಾಂಗದ ಉದ್ದೇಶವಾಗಿದ್ದು, ಅಶಕ್ತರು, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ಸೇವೆ ದೊರಕಿಸಲು ಕಾನೂನು ಸೇವೆಗಳ ಸಮಿತಿ ಕ್ರಮ ಕೈಗೊಂಡಿದೆ. ಅರ್ಹರು ಇದರ ಉಪಯೋಗ ಪಡೆಯಬೇಕು' ಎಂದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆ ಕುರಿತು ವಕೀಲರ ಸಂಘದ ಕಾರ್ಯದರ್ಶಿ ಕೆ.ಆರ್. ಶ್ರೀಧರ್ ಮಾತನಾಡಿ, 'ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸಲು ಹಲವು ಮಾರ್ಗಗಳಿದ್ದು ಸಂಪನ್ಮೂಲದ ಹಂಚಿಕೆ, ಸ್ಥಾನಮಾನ ನೀಡಿಕೆ. ರಾಜಕೀಯ ಭಾಗವಹಿಸುವಿಕೆಯಲ್ಲಿ ಸಮಾನ ಅವಕಾಶ ನೀಡುವ ಮೂಲಕ ಅನುಷ್ಠಾನಗೊಳಿಸಬಹುದು' ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ಮಹೇಶ್ ಮಾತನಾಡಿ, 'ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸಲು 12ನೇ ಶತಮಾನದಲ್ಲೇ ಬಸವಣ್ಣನವರು ಪ್ರಯತ್ನಿಸಿದ್ದರು. ನಂತರ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ
ಮತ್ತು ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ್ದರು. ಸ್ವತಂತ್ರ ಭಾರತದಲ್ಲಿ ಸಂವಿಧಾನ ಸಾಮಾಜಿಕ ನ್ಯಾಯಕ್ಕೆ ಅವಕಾಶ ಮಾಡಿಕೊಟ್ಟಿದೆ' ಎಂದರು.
News5Kannada
Ravi Dummi
Tags
ಅರಕಲಗೂಡು