ಅರಕಲಗೂಡು: ಪಟ್ಟಣದಲ್ಲಿ ನೆನಗುದಿಗೆ ಬಿದ್ದಿರುವ ಒಳಚರಂಡಿ ವ್ಯವಸ್ಥೆ ಬಗ್ಗೆ ಸರ್ಕಾರದ ಗಮನ ಸೆಳೆಯುವ ಬಗ್ಗೆ ಹಿಂದಿನ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿದ್ದರೂ ಸಭಾ ನಡವಳಿ ಪುಸ್ತಕದಲ್ಲಿ ದಾಖಲಿಸದಿರುವ ಬಗ್ಗೆ ಶುಕ್ರವಾರ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ಸದಸ್ಯ ರಮೇಶ್ ವಾಟಾಳ್ ಆಕ್ಷೇಪ ವ್ಯಕ್ತಪಡಿಸಿದರು.
ಅಧ್ಯಕ್ಷ ಎಸ್. ಎಸ್. ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ರಮೇಶ್ ವಾಟಾಳ್ ಮಾತನಾಡಿ, ಒಳಚರಂಡಿ ವ್ಯವಸ್ಥೆ ಕಾಮಗಾರಿ ಅಧರ್ಕ್ಕೆ ನಿಂತು ವರ್ಷಗಳೆ ಕಳೆದಿವೆ. ಈ ಕುರಿತು ಸರ್ಕಾರದ ಗಮನ ಸೆಳೆಯಲು ಪಪಂನ ಎಲ್ಲ ಸದಸ್ಯರೂ ಒಗ್ಗೂಡಿ ವಿಧಾನಸೌಧದ ಮುಂದಿನ ಗಾಂಧಿ ಪ್ರತಿಮೆ ಮುಂದೆ ಸತ್ಯಾಗ್ರಹ ನಡೆಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಮಾಧ್ಯಮಗಳು ಇದಕ್ಕೆ ಪ್ರಾಮುಖ್ಯತೆ ನೀಡಿ ಸುದ್ದಿ ಮಾಡಿದ್ದವು. ಆದರೆ ಇಂತಹ ಪ್ರಮುಖ ವಿಷಯದ ಕುರಿತು ನಡವಳಿಕೆ ಪುಸ್ತಕದಲ್ಲಿ ದಾಖಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ವಿಷಯ ಸೂಚಿಯಲ್ಲಿ ಇರದಿದ್ದ ಕಾರಣ ಇದನ್ನು ದಾಖಲು ಮಾಡಿಲ್ಲ ಎಂದು ಅಧ್ಯಕ್ಷ ಪ್ರದೀಪ್ ಕುಮಾರ್ ಸಮಾಜಾಯಿಶಿ ನೀಡಿದರು. ಈ ಹಂತದಲ್ಲಿ ಕೆಲಕಾಲ ಕಾವೇರಿದ ಚರ್ಚೆ ನಡೆಯಿತು. ನಡವಳಿಕೆ ಪುಸ್ತಕದಲ್ಲಿ ದಾಖಲಾಗಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುವ ನೀವು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದು ಬಿಟ್ಟರೆ ಕಳೆದ ಎರಡು ತಿಂಗಳಿನಿಂದ ಸದಸ್ಯರನ್ನು ಸಂಪರ್ಕಿಸಿ ಹೋರಾಟಕ್ಕೆ ಮುಂದಾಗಲಿಲ್ಲ ಎಂದು ಸದಸ್ಯ ಅನಿಕೇತನ್ ಪ್ರಶ್ನಿಸಿದರು.
Tags
ಅರಕಲಗೂಡು