ರೈತ ಸಂಘಟನೆ ರೈತನ ಆತ್ಮಗೌರವದ ಸಂಕೇತ - ಎಸ್ .ಎನ್.ಮಂಜುನಾಥದತ್ತ

ಅರಕಲಗೂಡು: ರೈತ ಸಂಘಟನೆ ರೈತನ ಆತ್ಮಗೌರವದ ಸಂಕೇತ. ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರ ವಿಚಾರಧಾರೆಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಬೇಕು ಎಂದು ರೈತ ಸಂಘದ  ಹಿರಿಯ ಹೋರಾಟಗಾರ ಎಸ್ .ಎನ್.ಮಂಜುನಾಥದತ್ತ ತಿಳಿಸಿದರು. 

ರೈತ ಸಂಘ ಹಾಗೂ ಹಸಿರು ಸೇನೆ ಪಟ್ಟಣದ ಎಪಿಎಂಸಿ ಯಾರ್ಡ್ ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರೊ ಎಂ.ಡಿ. ನಂಜುಂಡಸ್ವಾಮಿಯವರ 90 ನೇ ಜನ್ಮ ದಿನಾಚರಣೆ ಹಾಗೂ  ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು, ಮಾತನಾಡಿದರು. ಡಾ. ರಾಮನೋಹರ್ ಲೋಹಿಯಾರವರ ನೇರ ಶಿಷ್ಯರಾಗಿದ್ದ ನಂಜುಂಡಸ್ವಾಮಿ ರಾಜ್ಯದಲ್ಲಿ ಸಮಾಜವಾದಿ ಸಿದ್ಧಾಂತಕ್ಕೆ ರೈತ ಚಳವಳಿಯ ಮೂಲಕ ಹೊಸ ಆಯಾಮ ನೀಡಿದರು. 50 ವರ್ಷಗಳ ಹಿಂದೆಯೇ ಶಿವಮೊಗ್ಗದಲ್ಲಿ ಕಬ್ಬು ಬೆಳೆಗಾರರ ಹೋರಾಟದ ಮೂಲಕ ರೈತ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ್ದರು. ಅಂದು ಜಿಲ್ಲಾಧಿಕಾರಿಗಳ ಮನೆಯನ್ನೇ ಜಪ್ತಿ ಮಾಡಲು ಮುಂದಾದ ಅವರ ಧೈರ್ಯ ಇಂದಿನ ಹೋರಾಟಗಾರರಿಗೆ ಸ್ಫೂರ್ತಿಯಾಗಬೇಕು ಎಂದರು. ನಂಜುಂಡಸ್ವಾಮಿ ರಾಜಕೀಯ ಪಕ್ಷಗಳನ್ನು ಕುಷ್ಠರೋಗದ ಸಂಸ್ಥೆಗಳು ಎಂದು ಕರೆಯುತ್ತಿದ್ದರು. ಅಧಿಕಾರಕ್ಕಾಗಿ ಸಿದ್ಧಾಂತಗಳನ್ನು ಬಲಿಕೊಟ್ಟು, ಯಾವ ಪಕ್ಷ ಅಧಿಕಾರದಲ್ಲಿದೆಯೋ ಅದರ ಹಿಂದೆ ಹೋಗುವ ಇಂದಿನ  ಸಮಾಜವಾದಿಗಳ ಎಡಬಿಡಂಗಿ ನಡೆ ನಾಚಿಕೆಗೇಡಿನ ಸಂಗತಿ, ಸಂಘಟನೆಯು ಎಂದಿಗೂ ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಬೇಕು. ಶಿಸ್ತು ಮತ್ತು ಪ್ರಾಮಾಣಿಕತೆಯೇ ಸಂಘಟನೆ ಜೀವಾಳ. ತಾಲ್ಲೂಕಿನಲ್ಲಿ ಯುವಕರು,  ಹಿರಿಯರು, ಮಹಿಳೆಯರು ಸೇರಿದಂತೆ ಬಡವರು ಮತ್ತು ದಲಿತರ ಮನೆ ಬಾಗಿಲಿಗೆ ಹೋಗಿ ಎಲ್ಲರನ್ನೂ ಒಗ್ಗೂಡಿಸುವತ್ತ ಗಮನ ಹರಿಸಿ, ಸಂಘಟನೆಗೆ ಹೊಸ ರಕ್ತ ಮತ್ತು ಆಧುನಿಕ ಆಲೋಚನೆಗಳನ್ನು ತರಲು ವಿದ್ಯಾವಂತ ಯುವಕರನ್ನು ಮುನ್ನೆಲೆಗೆ ತರುವುದು ಅಗತ್ಯ ಎಂದರು.
ಸಾನಿಧ್ಯ ವಹಿಸಿದ್ದ ದೊಡ್ಡಮಠದ ಮಠಾಧೀಶ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಕಣಗಾಲ್ ಮೂರ್ತಿ, ತಹಶೀಲ್ದಾರ್ ಕೆ.ಸಿ.ಸೌಮ್ಯ, ಬೇಲೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್, ತಾಲ್ಲೂಕು ಸಂಘದ ಅಧ್ಯಕ್ಷ  ಎಚ್. ಎಚ್. ಭುವನೇಶ್ ಮಾತನಾಡಿದರು.

 ಮುಖಂಡರಾದ ಹೊಂಬೇಗೌಡ, ಎಚ್. ಇ.ಜಗಧೀಶ್, ಪ್ರಕಾಶ್,ಬಾಲಣ್ಣ, ಬಸವರಾಜ್, ಚಲವರಾಜೇಅರಸ್, ಸರೋಜಮ್ಮ, ಪುರುಷೋತ್ತಮ ಗೌಡ, ಬಿಎಸ್ ಪಿ ರಾಜ್ಯ ಕಾರ್ಯದರ್ಶಿ ಅತ್ನಿ ಹರೀಶ್ ಉಪಸ್ಥಿತರಿದ್ದರು.

 ಗ್ಯಾರೆಂಟಿರಾಮಣ್ಣ ಮತ್ತು ಸಂಗಡಿಗರು ರೈತ ಗೀತೆಗಳ ಗಾಯನ ನಡೆಸಿದರು.  ಅನಕೃ ವೃತ್ತದಿಂದ ಕಾರ್ಯಕ್ರಮದ ವೇದಿಕೆ ವರೆಗೆ ಮೆರವಣಿಗೆ ನಡೆಸಲಾಯಿತು.

Post a Comment

Previous Post Next Post