ಅರಕಲಗೂಡು : ಪಟ್ಟಣದ ಕ್ರಿಸ್ತಜ್ಯೋತಿ ಶಾಲೆಯ ಆಡಳಿತ ಮಂಡಳಿ ಕೆಲ್ಲೂರು ಗ್ರಾಮದ ಸರಕಾರಿ ಕೆರೆಯ ಜಾಗ ಮತ್ತು ಸಾರ್ವಜನಿಕ ಏರಿಯನ್ನು ದುರ್ಬಳಕೆ ಮಾಡಿಕೊಂಡಿದ್ದು,ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಪಂ ಮಾಜಿ ಕೆಡಿಪಿ ಸದಸ್ಯ ಶಶಿಕುಮಾರ್ ಆಗ್ರಹಿಸಿದ್ದಾರೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆಲ್ಲೂರು ಗ್ರಾಮದ ಸರ್ವೇನಂಬರ್ 45ರಲ್ಲಿ ಸುಮಾರು 3ಎಕರೆ ನಾಲ್ಕುಗುಂಟೆ ವಿಸ್ತೀರ್ಣದಲ್ಲಿ ಕೆರೆಯ (ಮಗೆಯುವ ಕೆರೆ)ಜಾಗವಿದ್ದು,ಈ ಖಾಸಗಿ ಶಾಲೆ ಆರಂಭಗೊಂಡ ಮೇಲೆ ಪ್ರತಿ ವರ್ಷವೂ ಹಂತ ಹಂತವಾಗಿ ಒತ್ತುವರಿಯಾಗಿ ಅವಸಾನದ ಹಂಚಿಗೆ ತಲುಪಿದೆ.ಕೆರೆಯ ಎರಡು ಭಾಗದಲ್ಲಿ ಕ್ರಿಸ್ತಜ್ಯೋತಿ ಶಾಲೆಗೆ ಸೇರಿದ ಜಮೀನು ಇದೆ.ಈ ಸಲುವಾಗಿ ಕಾಂಪೌಡ್ ನಿರ್ಮಾಣ,ರಸ್ತೆ ಹಾಗೂ ವಾಹನ ನಿಲುಗಡೆ ಸಲುವಾಗಿ ಕೆರೆಯ ಜಾಗವನ್ನು ಒತ್ತುವರಿಮಾಡುತ್ತಿರುವುದು ಕಂಡುಬಂದಿದೆ ಎಂದು ಆರೋಪಿಸಿದ್ದಾರೆ.
ಈ ಕೆರೆಯೂ ತುಂಬಾ ಪುರಾತನವಾಗಿದ್ದು ನಮ್ಮ ಗ್ರಾಮದ ಪೂರ್ವಿಕರೆಲ್ಲರೂ ಅಲ್ಲಿಗೆ ಹೋಗಿ ಈ ಹಿಂದೆ ಕುಡಿಯಲು ನೀರನ್ನು ತರುತ್ತಿದ್ದರು ಎಂಬ ಇತಿಹಾಸವಿದೆ ಈಗ ಆ ಕೆರೆಯು ತುಂಬಾ ಗಲೀಜು ಆಗಿದ್ದು ಯಾವುದಕ್ಕೂ ಉಪಯೋಗವಿಲ್ಲದೆ ತುಂಬಾ ಕೊಳಕು ಆಗಿರುತ್ತದೆ ಅದರ ಪಕ್ಕ ಇರುವ ಕ್ರಿಸ್ತ ಜ್ಯೋತಿ ಶಾಲೆಯವರು ಆ ಕೆರೆಯನ್ನು ಒತ್ತುವರಿ ಮಾಡುತ್ತಿರುವುದಲ್ಲದೇ ಅನಗತ್ಯ ತ್ಯಾಜ್ಯವನ್ನು ಹಾಕುವುದು ಕಂಡುಬಂದಿದೆ. ಹಾಲಿ ಕೆರೆಯ ನೀರು ಸಂಪೂರ್ಣವಾಗಿ ಮಲೀನಗೊಂಡಿದೆ.ಹೀಗಿದ್ದರೂ ಕೂಡ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಇದೇ ನೀರನ್ನು ಬಳಕೆ ಮಾಡಿಕೊಂಡು ಭತ್ತ,ಇತರೆ ಕೃಷಿಯನ್ನು ಕೈಗೊಳ್ಳುತ್ತಿದ್ದಾರೆ ಎಂದು ದೂರಿದರು.
ಈ ಖಾಸಗಿ ಶಾಲೆದ ವೇಳೆ ಮಕ್ಕಳು ಕೆರೆ ಏರಿ ಮೇಲೆ ನಡೆದು ಹೋಗುತ್ತಿದ್ದರು.ಆಗ ಕೆರೆ ಏರಿ ಕಿರಿದಾಗಿತ್ತು.ಹಾಲಿ ಸಾವಿರಕ್ಕೂ ಅಧಿಕ ಮಕ್ಕಳು ಓದುತ್ತಿದ್ದು,ಹತ್ತಾರು ಬಸ್‌ಗಳನ್ನು ಹೊಂದಲಾಗಿದೆ.ಈ ಸಲುವಾಗಿ 8ಅಡಿ ಅಗಲವಿದ್ದ ಕೆರೆ ಏರಿ ಈಗ 20ಅಡಿ ಅಗಲವನ್ನು ಹೊಂದಿದೆ.ಇದರಿಂದಲೇ ಕೆರೆ ಜಾಗ ಸುಮಾರು ಒಂದು ಎಕರೆ ವಿಸ್ತೀರ್ಣ ರಸ್ತೆಗೆ ಬಳಕೆ ಮಾಡಿಕೊಂಡಿರುವ ಅನುಮಾನವಿದೆ.ಅಲ್ಲದೆ ಶಾಲೆಗೆ ತೆರಳುವ ಸಲುವಾಗಿ ಕೋಡಿಯಲ್ಲಿ ಅವೈಜ್ಞಾನಿಕ ಸೇತುವೆ ನಿರ್ಮಿಸಿರುವ ಪರಿಣಾಮ ಅರ್ಧಕೆರೆಯ ನೀರು ಅನವಶ್ಯವಾಗಿ ಪೋಲಾಗುತ್ತಿದೆ.ಇದರಿಂದ ಅಚ್ಚುಕಟ್ಟುದಾರರಿಗೆ ತೊಂದರೆಯಾಗುತ್ತಿದೆ.
ಈ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಪ್ರವೇಶ ದೊರೆಯುತ್ತಿಲ್ಲ.ವಾರ್ಷಿಕವಾಗಿ ಒಂದು ಮಗುವಿಗೆ ಕನಿಷ್ಠ 60ಸಾವಿರರೂ ವಸೂಲಿ ಮಾಡಲಾಗುತ್ತಿದೆ.ಕೆಲ್ಲೂರು ಗ್ರಾಮದಲ್ಲಿ ಇರುವವರೆಲ್ಲರೂ ಕೂಡ ಬಡವರೇ ಆಗಿದ್ದಾರೆ.ಒಬ್ಬರಿಗೂ ಕೂಡ ಉಚಿತವಾಗಿ ಪ್ರವೇಶ ನೀಡಿಲ್ಲ.ಆದರೆ ಕೆಲ್ಲೂರು ಗ್ರಾಮದ ಕೆರೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಕೆರೆಯು ಅರಕಲಗೂಡು ಪಟ್ಟಣಕ್ಕೆ ಸೇರಿದಾಗಿದ್ದು ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ ಆದ್ದರಿಂದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕೆರೆ ಸ್ವಚ್ಛತೆ ಬಗ್ಗೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಬೇಕಿದೆ.ಇದಕ್ಕೂ ಮುನ್ನಾ ತಹಸೀಲ್ದಾರ್ ಅವರು ಸ್ಥಳಕ್ಕೆ ಭೇಟಿನೀಡಿ ಕೆರೆ ಒತ್ತುವರಿಯನ್ನು ಕೂಡಲೇ ಬಿಡಿಸಬೇಕು.ಇದಲ್ಲದೇ ಸರ್ವೇನಂಬರ್ ಜಾಗದಲ್ಲಿ ಶಾಲೆಯನ್ನು ತೆರೆಯಲು ಶಿಕ್ಷಣ ಇಲಾಖೆ ಅನುಮತಿ ನೀಡಿರುವುದು ಕೂಡ ಅಕ್ಷಮ್ಯ ಅಪರಾಧವಾಗಿದೆ.ಒಂದು ಕಡೆ ಆಳವಾದ ಕೆರೆ ಮತ್ತೊಂದು ಕಡೆ ತಗ್ಗು ಪ್ರದೇಶದಲ್ಲಿನ ಅಚ್ಚುಕಟ್ಟು ಪ್ರದೇಶವಿದೆ.ಈ ನಡುವೆ ಶಾಲಾ ಬಸ್, ಖಾಸಗಿ ವಾಹನಗಳ ಸಂಚಾರ ಮತ್ತು ಇದರೊಂದಿಗೆ ಮಕ್ಕಳ ಓಡಾಟ,ಇದನ್ನು ಕಂಡರೆ ಭಯವಾಗುತ್ತದೆ.ತುಂಬಾ ಅಪಾಯದಲ್ಲಿ ಶಾಲಾ ಮಕ್ಕಳು ಸಂಚರಿಸುತ್ತಾರೆ.ಮಕ್ಕಳ ಹಿತದೃಷ್ಠಿ ಮತ್ತು ಸರಕಾರಿ ಕೆರೆ ಸಂರಕ್ಷಣೆ ಸಲುವಾಗಿ ಕ್ರಿಸ್ತಜ್ಯೋತಿ ಶಾಲೆಯ ಮಾನ್ಯತೆಯನ್ನು ಮತ್ತೊಮ್ಮೆ ಪರಿಶೀಲನೆ ನಡೆಸಬೇಕೆಂದು ಅವರು ಮನವಿ ಮಾಡಿದ್ದಾರೆ.
Tags
ಅರಕಲಗೂಡು