ಹಾಸನ: ಮದುವೆ ಸಮಾರಂಭಕ್ಕೆ ಲಕ್ಷಾಂತರ ಮೌಲ್ಯದ ಒಡವೆ ಧರಿಸಿಕೊಂಡು ಬಂದಿದ್ದ ಯುವತಿ ನಿಗೂಢವಾಗಿ ಕಣ್ಮರೆಯಾಗಿದ್ದು, ಕೆರೆಯೊಂದರ ಬಳಿ ಆಕೆಯ ಒಳ ಉಡುಪು, ಚಪ್ಪಲಿ, ವ್ಯಾನಿಟಿ ಬ್ಯಾಗ್ ಪತ್ತೆಯಾಗಿರುವ ಘಟನೆ ಆತಂಕ ಮೂಡಿಸಿದ್ದು, ಸ್ಥಳಕ್ಕೆ ಎಸ್ಪಿ ಶುಭನ್ವಿತ ಆಗಮಿಸಿ ಪರಿಶೀಲಿಸಿ ಕೊಲೆ ಶಂಕೆಯಲ್ಲಿ ಶೋಧ ಕಾರ್ಯವನ್ನು ಶನಿವಾರ ತೀವ್ರವಾಗಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಪ್ರಿಯಾಂಕ (೨೯) ಅವರು ಚಿಕ್ಕಮಗಳೂರಿನ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಫೆಬ್ರವರಿ ೧೨ರಂದು ರಾತ್ರಿ ೮ ಗಂಟೆ ಸುಮಾರಿಗೆ ಬೇಲೂರು ಬಸ್ ನಿಲ್ದಾಣದಿಂದ ಕಾಣೆಯಾಗಿದ್ದಾರೆ. ಸಂಜೆ ೭.೩೦ರ ವೇಳೆಗೆ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದ ಪ್ರಿಯಾಂಕ, “ಯಾರೋ ಜೊತೆಗಿದ್ದೇನೆ” ಎಂದು ಹೇಳಿ ಆತಂಕಕಾರಿ ರೀತಿಯಲ್ಲಿ ಫೋನ್ ಕಟ್ ಮಾಡಿದ್ದಾರೆ. ಆ ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕುಟುಂಬದವರು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಆತಂಕಗೊಂಡ ಸಂಬಂಧಿಕರು ಪೊಲೀಸರಿಗೆ ದೂರು ನೀಡಲು ಮುಂದಾದರೂ, ದೂರು ಸ್ವೀಕಾರದಲ್ಲಿ ವಿಳಂಬವಾಗಿದೆ ಎಂದು ಅರೆಹಳ್ಳಿ ಹಾಗೂ ಬೇಲೂರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಮತ್ತೊಂದು ತಿರುವಾಗಿ ರಾಷ್ಟ್ರೀಯ ಹೆದ್ದಾರಿ ೩೭೩ರ ಕೆರೆ ಸಮೀಪ ಪ್ರಿಯಾಂಕ ಅವರ ಚಪ್ಪಲಿ, ಒಳಉಡುಪು ಮತ್ತು ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದಿದೆ. ಘಟನೆ ಸ್ಥಳದಲ್ಲಿ ಮೊದಲ ದಿನ ಯಾವುದೇ ವಸ್ತುಗಳು ಕಾಣಿಸದಿದ್ದರೆ, ಎರಡನೇ ದಿನ ಬಟ್ಟೆಗಳು ಹಾಗೂ ಬ್ಯಾಗ್ ಸಿಕ್ಕಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಮೈಮೇಲೆ ಸುಮಾರು ೩೦ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿದ್ದ ಪ್ರಿಯಾಂಕ ಅವರನ್ನು ಒಡವೆಗಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಶವವನ್ನು ಕೆರೆಗೆ ಎಸೆದಿರಬಹುದು ಎಂಬ ಆಧಾರದಲ್ಲಿ ಅಗ್ನಿಶಾಮಕ ದಳದ ಸಹಾಯದಿಂದ ಕೆರೆಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಕುಟುಂಬಸ್ಥರು ಹೇಳುವಂತೆ ಮೊದಲ ದಿನವೇ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದರೆ ನಮ್ಮ ಮಗಳು ಬದುಕಿರಬಹುದಿತ್ತು ಎಂದು ಕಣ್ಣೀರಿಟ್ಟಿದ್ದಾರೆ. ಘಟನೆ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದ್ದಾರೆ.
Tags
ಹಾಸನ