200 ವರ್ಷಗಳ ಬಳಿಕ ಹೊಯ್ಸಳರ ಕಾಲದ ಶ್ರೀ ಚನ್ನಕೇಶವ ಸ್ವಾಮಿ ದೇಗುಲಕ್ಕೆ ಪುನರ್ಜನ್ಮ!

ಹಾಸನ: ತಾಲೂಕಿನ ಮೆಳಗೋಡು ಗ್ರಾಮದಲ್ಲಿ ಸುಮಾರು ಎರಡು ಶತಮಾನಗಳಿಂದ ಶಿಥಿಲಾವಸ್ಥೆಯಲ್ಲಿದ್ದ, ಹೊಯ್ಸಳರ ಕಾಲದ ಅಪರೂಪದ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಭವ್ಯ ಚಾಲನೆ ನೀಡಲಾಗಿದೆ.

ಹೊಯ್ಸಳ ಸಾಮ್ರಾಜ್ಯದ ಶೈಲಿಯಲ್ಲಿ ನಿರ್ಮಾಣವಾಗಿದ್ದ ಈ ದೇವಸ್ಥಾನವು ಕಾಲಾನಂತರದಲ್ಲಿ ನಿರ್ವಹಣೆಯಿಲ್ಲದೆ ಸುಮಾರು 200 ವರ್ಷಗಳ ಹಿಂದೆಯೇ ಹಾಳಾಗಿತ್ತು. ರಾಜ್ಯದ ಕೆಲವೇ ಕೆಲವು ಸ್ಥಳಗಳಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ವಾಸ್ತುಶಿಲ್ಪದ ಚನ್ನಕೇಶವ ಮೂರ್ತಿ ಈ ಗ್ರಾಮದ ದೇವಸ್ಥಾನದಲ್ಲಿತ್ತು ಎನ್ನುವುದು ಈ ಭಾಗದ ವಿಶೇಷತೆ. ಹಿರಿಯರು ಹೇಳುತ್ತಿದ್ದ ಈ ದೇವಸ್ಥಾನದ ಇತಿಹಾಸವನ್ನು ಕೇಳಿ ಪುಳಕಿತರಾಗಿದ್ದ ಗ್ರಾಮಸ್ಥರು, ಇದೀಗ ಭಕ್ತಿಭಾವದಿಂದ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗ್ರಾಮದ ಹಿರಿಯರು ಹಾಗೂ ಭಕ್ತಾದಿಗಳು ಜೀರ್ಣೋದ್ಧಾರ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಮಣ್ಣಿನಲ್ಲಿ ಹೂತುಹೋಗಿದ್ದ ಕಲೆ ಮತ್ತು ಸಂಸ್ಕೃತಿಯನ್ನು ಮತ್ತೆ ಎತ್ತಿ ಹಿಡಿಯುವ ಈ ಕಾರ್ಯಕ್ಕೆ ಇಡೀ ಗ್ರಾಮವೇ ಸಾಕ್ಷಿಯಾಯಿತು.

ಇಂದಿನ ಗುದ್ದಲಿ ಪೂಜೆಯ ಮೂಲಕ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ, ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

ಈ ದೇವಾಲಯವು ಹೊಯ್ಸಳರ ಕಾಲದ ವಿಶಿಷ್ಟ ಕೆತ್ತನೆಗಳನ್ನು ಹೊಂದಿರುವ ಕುರುಹುಗಳಿವೆ. ನಶಿಸಿಹೋಗುತ್ತಿದ್ದ ಐತಿಹಾಸಿಕ ತಾಣವೊಂದನ್ನು ಗ್ರಾಮಸ್ಥರೇ ಒಂದಾಗಿ ಮತ್ತೆ ನಿರ್ಮಿಸಲು ಮುಂದಾಗಿರುವುದು ಸಾರ್ವಜನಿಕರ  ಪ್ರಶಂಸೆಗೆ ಪಾತ್ರವಾಗಿದೆ.

Post a Comment

Previous Post Next Post