Arkalgud : ಕಾರ್ಮಿಕ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ

ವಿವಿಧ ಕಾರ್ಮಿಕ ಸಂಘಟನೆಗಳಿಂದ ರಸ್ತೆ ತಡೆ | ವಿವಿಧ ಕಾಯ್ದೆಗಳ ತಿದ್ದುಪಡಿಗೆ ಖಂಡನೆ

ಅರಕಲಗೂಡು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಎಐಟಿಯುಸಿ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದವು. 
ಗ್ರಾಪಂ ಹೊರಗುತ್ತಿಗೆ ನೌಕರರು, ಅಂಗನವಾಡಿ ನೌಕರರು, ಬಿಸಿಯೂಟ ನೌಕರರು  ಕೊತ್ತಲು ಗಣಪತಿ ಉದ್ಯಾನದಿಂದ ಪ್ರಮುಖ ಬೀದಿಗಳಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಅನಕೃ ವೃತಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸಿದರು. ಬಳಿಕ ಕೆಲಕಾಲರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.  ಸಿಐಟಿಯು ಮುಖಂಡ ಲಿಂಗರಾಜ್  ಮಾತನಾಡಿ, ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಹಿತ ಕಾಯುವ  ಉದ್ದೇಶದಿಂದ ತಂದಿರುವ ಕಾರ್ಮಿಕ ವಿರೋಧಿ ಕಾನೂನು ಕಾರ್ಮಿಕರ ಹಕ್ಕು ಮತ್ತು ಹಿತಾಸಕ್ತಿಗೆ ವಿರುದ್ದವಾಗಿದ್ದು ಕೂಡಲೆ ಇದನ್ನು ಹಿಂಪಡೆಯಬೇಕು,  ರದ್ದುಪಡಿಸಿರುವ ಕನಿಷ್ಠ ವೇತನ ಪದ್ಧತಿಯನ್ನು ಪುನಃ ಜಾರಿಗೆ ತರಬೇಕು,ಅಂಗನವಾಡಿ, ಗ್ರಾಪಂ ನೌಕರರಿಗೆ ಸೇವಾ ಭದ್ರತೆ  ದೊರಕಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 
ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷೆ ಯಶೋಧಮ್ಮ ಮಾತನಾಡಿದರು. ಮುಖಂಡರಾದ ಅಶೋಕ್, ಲೀನಾ ಡಯಾಸ್, ಅಂಬಿಕಾ,ಚಂದ್ರೇಗೌಡ,  ಸುಬ್ರಹ್ಮಣ್ಯ  ಉಪಸ್ಥಿತರಿದ್ದರು.

Post a Comment

Previous Post Next Post