ಅರಕಲಗೂಡು: 'ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ವ್ಯಂಗ್ಯವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು, ಪ್ರಧಾನಿ ಮೋದಿ ಇವರನ್ನು ಸಂಪುಟದಿಂದ ಕೈಬಿಡಬೇಕು' ಎಂದು ದಸಂಸ ಹಿರಿಯ ಮುಖಂಡ ಎಚ್.ಕೆ.ಸಂದೇಶ್ ಆಗ್ರಹಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಬಣ) ತಾಲ್ಲೂಕು ಘಟಕ ಅಂಬೇಡ್ಕರ್ 68 ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಶುಕ್ರವಾರ ಪಟ್ಟಣದ ದೇವರಾಜ ಅರಸು ಭವನದಲ್ಲಿ ಏರ್ಪಡಿಸಿದ್ದ ದಿವಂಗತ ದಲಿತ ಚಳುವಳಿ ಹೋರಾಟಗಾರರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
'ಅಂಬೇಡ್ಕರ್ ರಚಿಸಿದ ಸಂವಿಧಾನ ಇಲ್ಲದಿದ್ದರೆ ಜೈನ ಸಮುದಾಯಕ್ಕೆ ಸೇರಿದ ಅಮಿತ್ ಶಾ ಗೃಹ ಸಚಿವರಾಗಲು ಸಾಧ್ಯವೇ ಇರುತ್ತಿರಲಿಲ್ಲ. ನಿಮ್ಮ ಒಂದು ಮಾತಿನಿಂದ ದೇಶ ಇಂದು ಹೊತ್ತಿ ಉರಿಯುತ್ತಿದೆ. ರಾಜೀನಾಮೆ ನೀಡಿ ಕೆಳಗಿಳಿಯಿರಿ. ಇದು ಅಂಬೇಡ್ಕರ್ ಪರಿನಿರ್ವಾಣ ದಿನದ ಸಂದರ್ಭದಲ್ಲಿ ನಮ್ಮ ಹಕ್ಕೊತ್ತಾಯ' ಎಂದರು.
'ದಲಿತರು, ತುಳಿತಕ್ಕೊಳಗಾದವರ ಪರ ಹೋರಾಟಕ್ಕೆ ತಮ್ಮ ಬದುಕನ್ನೇ ಮೀಸಲಿಟ್ಟ ಅಂಬೇಡ್ಕರ್ ಮಹಾನ್ ಮಾನವತಾವಾದಿ. ದೇಶ ಸ್ವಾತಂತ್ಯ ಗಳಿಸಿ 75 ವರ್ಷ ಕಳೆದರೂ ಇನ್ನೂ ಅಸ್ಪೃಷ್ಯತೆ, ಜಾತಿ ಪದ್ಧತಿ, ದಲಿತರ ಮೇಲಿನ ದೌರ್ಜನ್ಯಗಳು ನಿಂತಿಲ್ಲ. ಇವರು ಅಂದು ಹೋರಾಟ ನಡೆಸದಿದ್ದರೆ ಇಂದು ದಲಿತ ವರ್ಗಗಳ ಬದುಕನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರುತ್ತಿರಲಿಲ್ಲ. ತಮ್ಮ ಬದುಕನ್ನು ಸಮಾಜದ ಏಳಿಗೆಗಾಗಿ ಮುಡುಪಿಟ್ಟ ಇವರ ಚಿಂತನೆ ಯುವಜನರು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ದಲಿತ ಚಳವಳಿಗೆ ನೀರೆರೆದು ಪೋಷಿಸಿದ ಮಹನೀಯರನ್ನು ನೆನಪಿಸುವ ಕಾರ್ಯ ನಮ್ಮೆಲ್ಲರ ಕರ್ತವ್ಯ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಚಳವಳಿ ಮುನ್ನಡೆಸುವುದು ಅಗತ್ಯ' ಎಂದರು.
ವಕೀಲ ಬಿ.ಸಿ.ರಾಜೇಶ್ ಮಾತನಾಡಿ, 'ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಕಟ್ಟಿದ ದಿವಂಗತ ಮುಖಂಡರಾದ ಎಚ್.ಎಸ್.ಹರೀಶ್, ಬಿ.ಪಿ. ಜಯರಾಮ್. ಟಿ.ವಿ.ಶಿವರಾಮಯ್ಯ, ಲೋಕನಾಥ್, ಸ್ವಾಮಣ್ಣ, ವೆಂಕಟೇಶ್, ಸುದರ್ಶನ್ ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಇವರನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ದಸಂಸ ಹಮ್ಮಿಕೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ' ಎಂದರು.
ಎಸ್.ಸಿ.ಎಸ್.ಟಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶಮೂರ್ತಿ ಮಾತನಾಡಿದರು. ದಲಿತ ಚಳವಳಿಯನ್ನು ಕಟ್ಟಿದ ದಿವಂಗತ ಹೋರಾಟಗಾರರ ಕುಟುಂಬದವರು, ಹಿರಿಯ ದಲಿತ ಮುಖಂಡರನ್ನು ಗೌರವಿಸಲಾಯಿತು. ಎಸ್. ಎಸ್. ಎಲ್.ಸಿ, ದ್ವಿತೀಯ ಪಿಯು ಮತ್ತು ಪದವಿ ತರಗತಿಗಳಲ್ಲಿ ಹೆಚ್ಚು ಅಂಕ ಗಳಿಸಿದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ದಸಂಸ ಸಂಚಾಲಕ ಪಿ. ಶಂಕರ್, ಜಿಲ್ಲಾ ಸಂಚಾಲಕ ವಿರೇಶ್, ಪಪಂ ಸದಸ್ಯ ಅನಿಕೇತನ್, ಸಮಾಜ ಸೇವಕ ಕಾಂತರಾಜು, ಮುಖಂಡರಾದ ಸಣ್ಣಸ್ವಾಮಿ, ಎಂ. ಎಸ್. ಸುರೇಶ್, ಈರಾಜ್, ಚಂದ್ರಣ್ಣ, ರಮೇಶ್ ಮರಿಲಕ್ಕಿ, ಮೋಕಲಿ ಪುಟ್ಟರಾಜ್, ಚನ್ನಕೇಶವ, ಮಂಜು, ಲಕ್ಷ್ಮಣ, ಮಹೇಶ್, ಮಂಜು, ಟಿಎಚ್‌ಓ ಡಾ.ಪುಷ್ಪಲತಾ, ಶಿರಸ್ತೆದಾರ್ ಸಿ. ಸ್ವಾಮಿ ಉಪಸ್ಥಿತರಿದ್ದರು.
Tags
ಅರಕಲಗೂಡು