ಅರಕಲಗೂಡು : ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂಕಷ್ಟದಲ್ಲಿರುವ ತಂಬಾಕು ಬೆಳೆಗಾರರ ರಕ್ಷಣೆ,ಉತ್ತಮ ಬೆಲೆ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ಸಂಸದರು ಗಮನ ಹರಿಸಬೇಕೆಂದು ಒತ್ತಾಯಿಸಿ ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯನ್ನು ನ.18ರಂದು ಬಂದ್ ಮಾಡಿ ಆಹೋರಾತ್ರಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಹೊಗೆಸೊಪ್ಪು ಮಾರುಕಟ್ಟೆ ಸಂಪೂರ್ಣವಾಗಿ ಕೇಂದ್ರ ಸರಕಾರಕ್ಕೆ ಒಳಪಟ್ಟಿದೆ.ಹತ್ತಾರು ವರ್ಷಗಳಿಂದಲೂ ಕೂಡ ತಂಬಾಕು ಬೆಳೆಗಾರರ ಹಿತ ಕಾಪಾಡುವಲ್ಲಿ ಹೊಗೆ ಸೊಪ್ಪು ಬೆಳೆಯುವ ಭಾಗದ ಸಂಸದರು ನಿರ್ಲಕ್ಷö್ಯವಹಿಸಿರುವುದು ಕಂಡುಬಂದಿದೆ.ಈ ಬಾರಿ ಜಿಲ್ಲೆಯಿಂದ ಆಯ್ಕೆಗೊಂಡಿರುವ ಸಂಸದರಾದ ಶ್ರೇಯಸ್ ಪಟೇಲ್ ಅವರು ರೈತರ ಬಗ್ಗೆ ಕಾಳಜಿ ಹೊಂದಿದ್ದಾರೆ.ಈ ಸಲುವಾಗಿ ಕೇಂದ್ರ ಸರಕಾರದ ಗಮನ ಸೆಳೆಯುವ ಸಲುವಾಗಿಯೇ ಆಹೋರಾತ್ರಿ ಹೋರಾಟವನ್ನು ಹಮ್ಮಿಕೊಂಡಿದ್ದೇವೆ.ಅಲ್ಲದೆ ಸಂಸದರು ಸ್ಥಳಕ್ಕೆ ಆಗಮಿಸಿ ಬೆಳೆಗಾರರ ಮನವಿ ಸ್ವೀಕರಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಈ ಸಾಲಿನ ಮಾರುಕಟ್ಟೆ ಆರಂಭಗೊಂಡು ಒಂದು ತಿಂಗಳು ಕಳೆದಿದೆ.ಆದರೆನಿರೀಕ್ಷಿತ ಬೆಲೆಯನ್ನು ಬೆಳೆಗಾರರು ನೋಡಲು ಸಾಧ್ಯವಾಗಿಲ್ಲ.ಪ್ರಮುಖವಾಗಿ ಕೆಳೆದರ್ಜೆಯ ಹೊಗೆಸೊಪ್ಪು ಮತ್ತು ಕಪ್ಪು ಸೊಪ್ಪನ್ನು ಸಹ ಇದುವರೆಗೂ ಖರೀದಿಯಾಗುತ್ತಿಲ್ಲ.ಇದರಿಂದ ಬೆಳೆಗಾರರಿಗೆ ತುಂಬಾ ಸಮಸ್ಯೆಯಾಗಿದೆ.ಆಂದ್ರಪ್ರದೇಶದಲ್ಲಿ ಒಂದು ಕೇಜಿ ಹೊಗೆ ಸೊಪ್ಪಿಗೆ 4೦೦ರೂ ದೊರೆಯುತ್ತಿದೆ.ನಮ್ಮ ಮಾರುಕಟ್ಟೆಯಲ್ಲಿನ ದರ ಕೇವಲ 28೦ರಿಂದ 29೦ರೂ ಇದೆ.ಇದು ದೊಡ್ಡಪ್ರಮಾಣದ ಅಂತರದ ಬೆಲೆಯಾಗಿದೆ.ಇದನ್ನು ಸರಿದೂಗಿಸಬೇಕಿದೆ ಎಂದು ಒತ್ತಾಯಿಸಿದರು.
ತಂಬಾಕು ಬೆಳೆಯನ್ನು ಪ್ರಧಾನಮಂತ್ರಿ ಫಸಲ್ ವಿಮಾ ವ್ಯಾಪ್ತಿಗೆ ಸೇರಿಸಬೇಕೆಂದು ರೈತರು ಆಗ್ರಹ ಮಾಡುತ್ತಿದ್ದರೂ ಕೂಡ ಗಮನಹರಿಸಿಲ್ಲ.ಜಿಎಸ್‌ಟಿ,ಎಸ್‌ಜಿಎಸ್‌ಟಿ ಹೊರೆಯನ್ನು ಹಾಕಲಾಗುತ್ತಿದೆ.ತಂಬಾಕು ಬೆಳೆಗಾರರಿಗೆ ಬೆಳೆಗಾರರ ಕ್ಷೇಮಾಭಿವೃದ್ಧಿಯಿಂದ ಮರಣಹೊಂದಿದ ರೈತರಿಗೆ ಕೇವಲ 50ಸಾವಿರ ನೀಡುತ್ತಿದ್ದು,ಇದನ್ನು 5ಲಕ್ಷಕ್ಕೇ ಹೆಚ್ಚಿಸಬೇಕೆಂಬುದು ರೈತರ ಆಗ್ರಹವಾಗಿದೆ.ತಾಲೂಕಿನಲ್ಲಿ 8ಸಾವಿರಕ್ಕೂ ಅಧಿಕ ಮಂದಿ ನೊಂದಾಯಿತ ತಂಬಾಕು ಬೆಳೆಗಾರರು ಇದ್ದು,ಇದರೊಂದಿಗೆ 4ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅನಧಿಕೃತ ಬೆಳೆಗಾರರು ಸಹ ಇದ್ದಾರೆ.ಅಂದಿನ ಹೋರಾಟದಲ್ಲಿ ಎಲ್ಲಾ ಬೆಳೆಗಾರರು ಭಾಗವಹಿಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯಬೇಕೆಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಜಗದೀಶ್,ಮುಗಳೂರು ಕೃಷ್ಣೇಗೌಡ,ಮಂಜೇಗೌಡ ಹಾಜರಿದ್ದರು.
Tags
ಅರಕಲಗೂಡು