ಅರಕಲಗೂಡು: ತಂಬಾಕು ಬೆಳೆ ಮೇಲೆ ಕೇಂದ್ರ ಸರ್ಕಾರ ಮುಂಗಡ ಪತ್ರದಲ್ಲಿ ವಿಧಿಸಿದ್ದ ಶೇ 18 ಅಬಕಾರಿ ಸುಂಕವನ್ನು ರದ್ದುಪಡಿಸಿರುವ ಕ್ರಮವನ್ನು ಸ್ವಾಗತಿಸುವುದಾಗಿ ಜೆಡಿಎಸ್ ಮುಖಂಡ ಕೆ.ಎಸ್. ಸಾಂಬಶಿವಪ್ಪ ತಿಳಿಸಿದರು.
ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರಸರ್ಕಾರ ಸುಂಕ ವಿಧಿಸಿದ ಕಾರಣ ಮುಂದಿಟ್ಟು ತಂಬಾಕು ಖರೀದಿಸುವ ಕಂಪನಿಗಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದ್ದರಿಂದ ತಾಲ್ಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆ ಬಂದ್ ಆಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಶಾಸಕ ಎ. ಮಂಜು ಅವರಲ್ಲಿ ತಂಬಾಕು ಬೆಳೆಗಾರರು ಅಳಲು ತೋಡಿಕೊಂಡಾಗ ಕಂಪನಿ ಪ್ರತಿನಿಧಿಗಳ ಜತೆ ಬೆಳೆಗಾರರ ಸಮ್ಮುಖದಲ್ಲಿ ಮಾತು ಕತೆ ನಡೆಸಿದ್ದರು. ಬಳಿಕ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಬೆಳೆಗಾರರ ಸಂಕಷ್ಟವನ್ನು ವಿವಿರಿಸಿ ಅಬಕಾರಿ ಸುಂಕ ರದ್ದು ಪಡಿಸುವಂತೆ ಮನವಿ ಮಾಡಿದ್ದರು. ಕುಮಾರಸ್ವಾಮಿ ಅವರು ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್ ಅವರನ್ನು ಭೇಟಿ ಮಾಡಿ ಸುಂಕ ರದ್ದು ಪಡಿಸಲು ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾದರು.
ಇದರಿಂದ ತಂಬಾಕು ಮಾರುಕಟ್ಟೆ ಮತ್ತೆ ಪ್ರಾರಂಭವಾಗಿದ್ದು ಇದರಿಂದ ಬೆಳೆಗಾರರಲ್ಲಿ ಮೂಡಿದ್ದ ಆತಂಕ ದೂರಾಗಿದೆ. ಶಾಸಕ ಎ. ಮಂಜು ಮತ್ತು ಕೆಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಅಭಿನಂದಿಸುವುದಾಗಿ ಹೆಳಿದರು.
ತಂಬಾಕು ಬೆಳೆಗಾರರಾದ ನೇತ್ರಪಾಲ, ನರಸೇಗೌಡ, ಕಾಕೋಡನಹಳ್ಳಿ ಮಂಜು ಪತ್ರಿಕಾಗೋಷ್ಠಿಯಲ್ಲಿದ್ದರು.
ಆತಂಕ ಬೇಡ: ತಂಬಾಕು ಬೆಳೆಯ ಮೇಲೆ ವಿಧಿಸಿದ್ದ ಶೇ 18 ಅಬಕಾರಿ ಸುಂಕವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಸತತ ಪ್ರಯತ್ನದ ಫಲವಾಗಿ ರದ್ದುಗೊಂಡಿದ್ದು ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಎ. ಮಂಜು ತಿಳಿಸಿದರು.
ದೂರವಾಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳೆಗಾರರ ಹಿತ ಕಾಪಾಡುವಲ್ಲಿ ಸಚಿವ ಕುಮಾರಸ್ವಾಮಿ ಅಪಾರ ಪರಿಶ್ರಮ ವಹಿಸಿದ್ದಾರೆ. ತಂಬಾಕು ಮಾರುಕಟ್ಟೆ ಪುನರಾರಂಭವಾಗಿದ್ದು ಬೆಳೆಗಾರರು ತಂಬಾಕು ಮಾರಾಟ ಮಾಡಬಹುದಾಗಿದೆ. ಕಂಪನಿಗಳು ಉತ್ತಮ ದರವನ್ನು ರೈತರಿಗೆ ನೀಡುವ ಮೂಲಕ ಬೆಳೆಗಾರರ ಹಿತವನ್ನು ಕಾಯುವಂತೆ ಕೋರಿದರು.
Tags
ಅರಕಲಗೂಡು