ಅರಕಲಗೂಡು: ಕಟ್ಟೇಪುರ ಏತನೀರಾವರಿ ಯೋಜನೆಯಲ್ಲಿ ಜೂನ್ ಅಂತ್ಯಕ್ಕೆ ಪ್ರಯೋಗಿಕ ನೀರು ಹರಿಸುವ ಕಾರ್ಯ ಕೈಗೊಳ್ಳಲು ಸಿದ್ದತೆ ನಡೆದಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.
ಕಟ್ಟೆಪುರ ಏತನೀರಾವರಿ ಯೋಜನೆ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 18 ತಿಂಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಐದು ವರ್ಷ ಕಳೆದರೂ ಮುಗಿಯದಿರುವುದು ವಿಷಾದಕರ ಸಂಗತಿ. ಕಳೆದ ಕೆಲ ತಿಂಗಳಿನಿಂದ ನಿರಂತರವಾಗಿ ಸಭೆ ನಡೆಸಿದ ಪರಿಣಾಮ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು ಉಳಿಕೆ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಕಾಲಮಿತಿ ನೀಡಲಾಗಿದೆ ಎಂದರು.
₹123 ಕೋಟಿ ಅಂದಾಜು ವೆಚ್ಚದ ಮೊದಲ ಹಂತದ ಯೋಜನೆ ಅಂತಿಮ ಹಂತಕ್ಕೆ ಬಂದಿದ್ದು 200 ಕೆರೆಗಳಿಗೆ 75 ದಿನಗಳ ಕಾಲ ನೀರು ಹರಿಸುವ ಕಾರ್ಯ ಕೈಗೊಳ್ಳಲಾಗುವುದು. 78 ಕಿ.ಮೀ ರೈಸಿಂಗ್ ಮೇನ್ ಅಳವಡಿಕೆ ಕಾರ್ಯದಲ್ಲಿ 50 ಕಿ. ಮೀ ಕಾಮಗಾರಿ ಪೂರ್ಣಗೊಂಡಿದೆ. 1300 ಅಶ್ವಶಕ್ತಿ ಸಾಮರ್ಥ್ಯದ ನಾಲ್ಕು ನೀರೆತ್ತುವ ಯಂತ್ರಗಳನ್ನುಅಳವಡಿಕೆ ಮಾಡಲಾಗಿದ್ದು, 0.387 ಟಿಎಂಸಿ ನೀರನ್ನು ಬಳಕೆ ಮಾಡುವ ಗುರಿ ಹೊಂದಲಾಗಿದೆ. ಜಾಕ್ವೆಲ್ ಕಾಮಗಾರಿ ಪೂರ್ಣಗೊಳಿಸಲು ಮಾ. 31,ರೈಸಿಂಗ್ ಮೇನ್ ಉಳಿಕೆ ಕಾಮಗಾರಿಗೆ ಏ. 30, ಗ್ರಾವಿಟಿ ಮೇನ್ ಮೇ 30, ವಿದ್ಯುತ್ ಉಪಕೇಂದ್ರ ಮತ್ತು ಇತರ ಕಾಮಗಾರಿಗಳನ್ನು ಜೂನ್ 30ರೊಳಗೆ ಪೂರ್ಣಗೊಳಿಸಿ ಪ್ರಾಯೋಗಿಕ ನೀರು ಹರಿಸುವ ಕಾರ್ಯ ನಡೆಸುವಂತೆ ಗಡುವು ನೀಡಲಾಗಿದೆ. ಮೊದಲ ಹಂತದ ಕಾಮಗಾರಿ ಚಾಲನೆಗೆ ಬಂದ ಬಳಿಕ ₹ 77 ಕೋಟಿ ವೆಚ್ಚದ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಸತೀಶ್, ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣಮೂರ್ತಿ, ಇಇ ಪುಟ್ಟಸ್ವಾಮಿ, ಎಇಇ ದೀಪಕ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
Tags
ಅರಕಲಗೂಡು