ಅರಕಲಗೂಡು: ಇತಿಹಾಸ ಪ್ರಸಿದ್ಧ ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ತುಳು ಷಷ್ಠಿ ಮಹಾ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ತಿಂಗಳು ತೇರು ಎಂದೇ ಹೆಸರಾದ ರಥೋತ್ಸವದಲ್ಲಿ ನಾಡಿನ ನಾನಾ ಕಡೆಯಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ನೆತ್ತಿ ಸುಡುವ ಉರಿ ಬಿಸಿಲನ್ನೂ ಲೆಕ್ಕಿಸದೇ ಉತ್ಸಾಹದಿಂದ ಪಾಲ್ಗೊಂಡಿದ್ದರು. ಪಾರುಪತ್ತೇದಾರ್ ಶ್ರೀರಾಮ ಭಟ್ ಮುಖಂಡತ್ವದಲ್ಲಿ ಬೆಳಗ್ಗೆ ಆರ್ಚಕರ ತಂಡ ಹಲವು ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಪೂರೈಸಿತು. ದೇವರ ಉತ್ಸವ ಮೂರ್ತಿಯನ್ನು ದೇವಳದಿಂದ ಹೊರ ತಂದು ಅಲಂಕೃತ ರಥದ ಮೇಲೆ ಕೂರಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನ 12 ಗಂಟೆಗೆ ಭಕ್ತರು ಜಯ ಘೋಷಗಳ ನಡುವೆ ತೇರು ಎಳೆಯಲು ಆರಂಭಿಸಿದರು.
ತೇರು ಮುಂದೆ ಸಾಗುವಾಗ ನೆರೆದಿದ್ದ ಭಕ್ತರು ತೇರಿನತ್ತ ಹಣ್ಣು- ಜವನ ತೂರಿ ತಮ್ಮ ಭಕ್ತಿ ಸಮರ್ಪಿಸಿದರು. ರಥ ಬೀದಿಯಲ್ಲಿ ಸೇತುವೆ ತನಕ ಚಲಿಸಿದ ತೇರು ಸುಸೂತ್ರವಾಗಿ ಸಾಗಿ ಸ್ವ ಸ್ಥಾನಕ್ಕೆ ವಾಪಸಾಯಿತು. ರಥದಿಂದ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಕೊಂಡೊಯ್ದು ವೈಮಾಳಿ ಗೋತ್ಸವ ನೆರವೇರಿಸಿ ನಾಗ ಉಯ್ಯಾಲೆ ತೊಟ್ಟಿಯಲ್ಲಿ ಕೂರಿಸಿ ದೇವಸ್ಥಾನದ ಗರ್ಭಗುಡಿ ಹೊರಾಂಗಣದ ಸುತ್ತ ಪ್ರದಕ್ಷಿಣೆ ಹಾಕಿ ಶಾಂತೋತ್ಸವ ನಡೆಸಲಾಯಿತು.
ಮುಂಜಾನೆಯಿಂದಲೇ ಸಹಸ್ರಾರು ಭಕ್ತರು ಕಾವೇರಿ ನದಿಯಲ್ಲಿ ಪವಿತ್ರ ಸ್ನಾನ ಮುಗಿಸಿದ ನಂತರ ಸರದಿ ಸಾಲಿನಲ್ಲಿ ಬಂದು ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡರು.
ಹರಕೆ ಹೊತ್ತ ಭಕ್ತರು ಮುಡಿ ಸಲ್ಲಿಸಿದರು. ಹಲವರು ನಾಗದೋಷ ಪರಿಹಾರಕ್ಕಾಗಿ ಪ್ರಾರ್ಥಿಸಿ ನಾಗರಸೆಡೆ, ಕಜ್ಜಿತುರಿ ಮುಂತಾದ ಹರಕೆ ವಸ್ತುಗಳನ್ನು ಸಲ್ಲಿಸಿ ದೇವಸ್ಥಾನ ದಲ್ಲಿ ಹಣ್ಣು- ತುಪ್ಪ ನೈವೇದ್ಯ ಅರ್ಪಿಸಿ ಪ್ರಸಾದ ಸ್ವೀಕರಿಸಿದರು. ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿತ್ತು.
ಭಕ್ತರಲ್ಲಿ ಉಂಟಾದ ಆಶ್ಚರ್ಯ
ಭಕ್ತರಲ್ಲಿ ಉಂಟಾದ ಆಶ್ಚರ್ಯ ಹಾಗೂ ವಿಶ್ಮಯಕಾರಿ ಸಂಗತಿ.
ರಥೋತ್ಸವ ದಿನದಂದು 12ಗಂಟೆ 5ರಿಂದ 10ನಿಮಿಷ ಒಳಗೆ ಒಂದು ಗರುಡ ಮಾತ್ರ ದೇವಾಲಯ, ತೇರು ಸುತ್ತಾ ಪ್ರದಕ್ಷಣೆ ಹಾಕುವುದು ಕಂಡುಬರುತಿತ್ತು. ಆದರೆ ಈ ಬಾರಿ 5ಗರುಡಗಳು ಏಕ ಕಾಲದಲ್ಲಿ ಕಾಣಿಸಿಕೊಂಡಿರುವುದು ಭಕ್ತರಲ್ಲಿ ಮುಂದೆ ಮರುಕಳಿಸುವ ವಿಶ್ಮಯಕಾರಿ ಬೆಳವಣಿಗೆಗೆ ನಾಂದಿಯಾಗಿದೆ . ಈ ಎಲ್ಲಾ ಸನ್ಮಾರ್ಗ ಸಂಗತಿಗಳಿಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯವರೇ ಅನುಗ್ರಹ, ಸದ್ಗತಿಗಳನ್ನು ಕರುಣಿಸಬೇಕಿದೆ.
Tags
ರಾಮನಾಥಪುರ